ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಸಮಾಜ ವಿಜ್ಞಾನ ಸರಳೀಕರಣ: ಸಚಿವ ಕಾಗೇರಿ

ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಸಮಾಜ ವಿಜ್ಞಾನ ಸರಳೀಕರಣ: ಸಚಿವ ಕಾಗೇರಿ

Tue, 15 Dec 2009 03:15:00  Office Staff   S.O. News Service
ಬೆಂಗಳೂರು, ಡಿ.14: ಎಸ್ಸೆಸ್ಸೆಲ್ಸಿಯಲ್ಲಿರುವ ಸಮಾಜ ವಿಜ್ಞಾನ ವಿಷಯವನ್ನು ಸರಳೀಕರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ನಗರದ ಬಾದಾಮಿ ಹೌಸ್‌ನಲ್ಲಿ ಸೋಮವಾರ ಶ್ರೀರಂಗ ಸಂಶೋಧನಾ ಕೇಂದ್ರ ವತಿಯಿಂದ ನೂತನವಾಗಿ ಸಿದ್ಧಪಡಿಸಿರುವ ‘ಸಮಾಜ ವಿಜ್ಞಾನ ಬೋಧನೆಯಲ್ಲಿ ಹೊಸದೃಷ್ಟಿ’ ಎಂಬ ವಿಡಿಯೊ ಚಿತ್ರಗಳನ್ನೊಳಗೊಂಡ ಡಿವಿಡಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿಯ ಸಮಾಜ ವಿಜ್ಞಾನದಲ್ಲಿ ಘಟನೆಗಳ ವಿವರಣೆಗಿಂತ ಇಸವಿಗಳ ವಿವರಣೆಯೇ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ನೆನಪಿನಲ್ಲಿಟ್ಟುಕೊಳ್ಳಲು ಕಷ್ಟವಾಗುತ್ತಿದೆ. ಇದರಿಂದ ಕಳೆದ ಎರಡು ವರ್ಷದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಆದ್ದರಿಂದ ಈ ವಿಷಯವನ್ನು ಸರಳೀಕರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಗೇರಿ ತಿಳಿಸಿದರು.

ಸರಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ೮ನೆ ತರಗತಿಯವರೆಗೆ ಯಾವುದೆ ಕಾರಣಕ್ಕೂ ಅನುತ್ತೀರ್ಣ ಮಾಡಬಾರದು ಎಂಬ ನಿಯಮವಿದೆ. ಇದರಿಂದ ವಿದ್ಯಾರ್ಥಿಗಳು ಓದಿನತ್ತ ಹೆಚ್ಚಿನ ಆಸಕ್ತಿ ವಹಿಸುವುದಿಲ್ಲ. ಈ ಕಾರಣದಿಂದಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾ ಗುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಪ್ರಾಥಮಿಕ ಹಂತದಲ್ಲೆ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡಲು ಹಾಗೂ ಶಿಕ್ಷಣದತ್ತ ಹೆಚ್ಚು ಆಸಕ್ತಿ ವಹಿಸುವಂತೆ ಮಾಡಲು ಹೊಸ ವಿಧಾನಗಳನ್ನು ಅನುಸರಿಸಬೇಕಿದೆ. ಈ ಕುರಿತು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಶಾಲೆಗೆ ಒಂದು ಕಂಪ್ಯೂಟರ್: ಜಗತ್ತಿನ ಸವಾಲುಗಳನ್ನು ಮಕ್ಕಳು ಪ್ರಾಥಮಿಕ ಹಂತದಲ್ಲೆ ಸಮರ್ಥವಾಗಿ ಎದುರಿಸಲು ಪಠ್ಯಕ್ರಮದಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನದಿಂದ ಆವಿಷ್ಕಾರಗೊಳ್ಳುವುದನ್ನು ಒದಗಿಸ ಬೇಕಿದೆ. ಈ ನಿಟ್ಟಿನಲ್ಲಿ ಸರ್ವಶಿಕ್ಷಣ ಅಭಿಯಾನದಲ್ಲಿ ಪ್ರತಿ ಶಾಲೆಗೆ ಒಂದೊಂದು ಕಂಪ್ಯೂಟರ್ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ಕಾಗೇರಿ ತಿಳಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲು ಸಾಧ್ಯವಾಗಿದೆ. ಎಂಜಿನಿಯರಿಂಗ್, ವೈದ್ಯಕೀಯ ಮುಂತಾದ ಪದವಿಗಳಿಗಷ್ಟೇ ಸೀಮಿತವಾಗಿದ್ದ ಈ ಸಂಸ್ಥೆಗಳು ಇತ್ತೀಚೆಗೆ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ಪ್ರಾರಂಭಿಸಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ಮಾನವ ವಿದ್ಯಾ ಸಂಸ್ಥೆಯ ಶ್ರೀ ಶ್ರದ್ದಾನಾಥ ಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಎಸ್.ವಿಶ್ವನಾಥ್ ಮುಂತಾದವರು ಭಾಗವಹಿಸಿದ್ದರು.

Share: